11/02/2026
75 ವರ್ಷ ತುಂಬಿರುವ ವಿಮಾ ಪಿಂಚಿಣಿದಾರರಿಗೆ ವಿಮಾ ನಿಗಮ ಪಿಂಚಣಿದಾರದ ಸಂಘದಿಂದ ಆಯೋಜಿಸಿದ್ದ "ಸನ್ಮಾನ ಸಮಾರಂಭ" ವು ಅವಿಸ್ಮರಣೀಯ ವಾಗಿತ್ತು ಎಂದು ಹೃದಯತುಂಬಿ ಹೇಳಲು ಬಯಸುತ್ತೇನೆ. ಬದುಕಿನ ಸಂಜೆಯಲ್ಲಿರುವ ಸಂಗಾತಿಗಳಾದ ನಾವು ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದವರನ್ನು ಕಂಡಾಗ ನಮ್ಮ ನೆನಪುಗಳು ಹಿಂದಕ್ಕೆ ಸರಿದವು. ಐವತ್ತು ವರ್ಷಗಳ ಹಿಂದೆ ಉದ್ಯೋಗ ಅರಸುತ್ತಿದ್ದ ನಮಗೆ ಎಲ್.ಐ.ಸಿ. ನಮಗೆ ಕೆಲಸ ಕೊಟ್ಟು ಬದುಕನ್ನು ಕಟ್ಟಿಕೊಟ್ಟ ವಿಷಯ ವಿವರಿಸಲು ಪ್ರಾಯಶಃ ನೂರಾರು ಪುಟಗಳೇ ಬೇಕಾಗಬಹುದು. ಕೆಲಸಕ್ಕೆ ಸೇರಿದ ನಂತರ ನಮ್ಮ ಸಂಘಟನೆ - ಅಖಿಲ ಭಾರತ ವಿಮಾ ನೌಕರರ ಸಂಘದ ಬೆಂಗಳೂರು ವಿಬಾಗದ ವಿಮಾ ಕಾರ್ಪೊರೇಷನ್ ನೌಕರರ ಸಂಘವು ನಮಗೆ ಕೆಲಸದ ಭದ್ರತೆಯನ್ನು ಒದಗಿಸಿದ್ದು ಮಾತ್ರವಲ್ಲ ಕಾರ್ಯದಕ್ಷತೆ ಮತ್ತು ಒಂದು ದಿನದ ಪ್ರಾಮಾಣಿಕ ಕೆಲಸ ಮಾಡುವ ಕುರಿತು ನಮ್ಮಲ್ಲಿ ತಿಳುವಳಿಕೆ ನೀಡಿತು ಕೂಡ. ಜಗತ್ತನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಗಮನಿಸುವುದು ಹೇಗೆ ಎಂಬ ಹೊಸ ದೃಷ್ಟಿಕೋನವನ್ನು ಕಲಿಸಿತು. ನಮ್ಮ ಸುತ್ತಮುತ್ತಲ ದುಡಿಯುವ ಜನರ ಬದುಕಿನ ಬಗ್ಗೆಯೂ ನಮ್ಮ ಗಮನ ಹರಿಯುವಂತೆ ಮಾಡಿತು. ಕಾರ್ಮಿಕ ಪ್ರಜ್ಞೆ ಮತ್ತು ಸಾಮಾಜಿಕ ಅರಿವನ್ನೂ ಮೂಡಿಸಿತು. ಇತರ ವಿಭಾಗದ ಜನರನ್ನು ಕೂಡ ನಮ್ಮಂತೆಯೇ ಆರ್ಥಿಕವಾಗಿ ಸದೃಢಗೊಳಿಸಲು ಅವರಲ್ಲಿ ಸಂಘಟನಾ ಪ್ರಜ್ಞೆ ಬೆಳೆಸುವಂತೆ ನಮ್ಮನ್ನು ಪ್ರೇರೇಪಿಸಿತು ಅಂದರೆ ಅದು ಅತಿಶಯೋಕ್ತಿಯಾಗಲಾರದು. ಈಗ ಐವತ್ತು ವರ್ಷಗಳ ನಂತರ ಹಿಂತಿರುಗಿ ನೋಡಿದಾಗ ನಮ್ಮ ಪಯಣ ನಿಜಕ್ಕೂ ಸಾರ್ಥಕ ಎನಿಸುವಷ್ಡು ನಮ್ಮನ್ನು ನಮ್ಮ ಸಂಘ ಬೆಳೆಸಿತು. ನಮ್ಮ ಸಂಘದ ಅಖಿಲ ಭಾರತ ನಾಯಕರುಗಳ ಸರಳ ಜೀವನ ತ್ಯಾಗಮಯ ಧೋರಣೆ ನಮ್ಮನ್ನು ವಿನೀತರಾಗುವಂತೆ ಮಾಡಿತಷ್ಟೇ ಅಲ್ಲ ನಾವೂ ಕೂಡ ಅದೇ ದಾರಿಯಲ್ಲಿ ಸಾಗುವಂತೆ ಸ್ಪೂರ್ತಿ ನೀಡಿದೆ.
ಆ ಹಿನ್ನೆಲೆಯಲ್ಲಿ ಫೆಬ್ರವರಿ 8, 2026 ರ ಭಾನುವಾರ ನಡೆದ ಸಮಾರಂಭವು ಎಐಐಇಎ ಮತ್ತು ಎಐಐಪಿಎ ಪರಂಪರೆಗೆ ಅನುಗುಣವಾಗಿ ನಮ್ಮಲ್ಲಿ ಇವತ್ತು ನಮ್ಮ ಜವಾಬ್ದಾರಿ ಏನು ಎನ್ನುವುದನ್ನೂ ಮತ್ತೊಮ್ಮೆ ನೆನಪಿಸಿಕೊಟ್ಟಿತು. ನಮ್ಮೊಡನೆ ಕೆಲಸ ಮಾಡಿ ಬೇರೆ ಬೇರೆ ಕಾರಣಗಳಿಂದ ಅಸುನೀಗಿದ ಸಂಗಾತಿಗಳ ನೆನಪಾಗುವಂತಾಯಿತು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಮಗಿಂತ ಹಿರಿಯರು ಮತ್ತು ಕಿರಿಯರು ಎಲ್ಲರೂ ಅತ್ಯಂತ ಸಂತೋಷದಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಅವರ ಕಣ್ಣಂಚು ಒದ್ದೆಯಾಗಿದ್ದು ನಿಜಕ್ಕೂ ಭಾವನಾತ್ಮಕವಾಗಿದ್ದವು.
ನನಗಂತೂ ಆ ಸಮಾರಂಭ ನನ್ನ ವಯಸ್ಸನ್ನು ಇನ್ನೂ ಹತ್ತು ವರ್ಷ ಹೆಚ್ಚಿಸಿತು. ಆಗಾಗ ನಾವು ಹೀಗೆಯೇ ಸೇರಬೇಕು, ನಮ್ಮ ಕಷ್ಟಸುಖಗಳನ್ನು ಹಂಚಿಕೊಳ್ಳಬೇಕು, ಆಗ ಮಾತ್ರವೇ ನಮ್ಮ ಮನಸ್ಸು ಹಗುರಾಗುತ್ತದೆ.
ಸಮಾರಂಭವನ್ನು ಅಚ್ಚುಕಟ್ಟಾಗಿ ನೆರವೇರಿಸಲು ತಮ್ಮ ಸಮಯ, ಶ್ರಮ ಹಾಗೂ ಬದ್ಧತೆಯನ್ನು ಮುಡಿಪಾಗಿಟ್ಟ ಎಲ್ಲಾ ಸಂಗಾತಿಗಳಿಗೂ ಹೃದಯತುಂಬಿದ ಧನ್ಯವಾದಗಳು. ನಾವು ಮನುಷ್ಯರಾಗಿ ಪರಸ್ಪರರನ್ನು ಪ್ರೀತಿಸುವಂತಾಗಲೀ, ಯಾವುದೇ ಕಾರಣಕ್ಕೂ ಜಾತಿ, ಧರ್ಮ, ಬಾಷೆ ಮುಂತಾದ ಭಾವನಾತ್ಮಕ ವಿಷಯಗಳಿಂದ ದೂರವಿರುವಂತೆ ನೋಡಿಕೊಳ್ಳೋಣ ಎಂದು ನಮಗೆ ತಿಳಿಸಿದ ಗೆಳೆಯ ಅಮಾನುಲ್ಲಾ ಖಾನ್ ಅವರ ಮಾತನ್ನು ಸದಾ ನೆನಪಿನಲ್ಲಿ ಇಟ್ಡುಕೊಳ್ಳೋಣ.
ಟಿ. ಸುರೇಂದ್ರ ರಾವ್